ಕೊಂಕಣ

ಭಾರತದ ಪಶ್ಚಿಮತೀರದಲ್ಲಿ, ಮಹಾರಾಷ್ಟ್ರದ ಠಾಣೆ (ಥಾನಾ) ಕೊಲಾಬಾ ಮತ್ತು ರತ್ನಾಗಿರಿ ಜಿಲ್ಲೆಗಳನ್ನೂ ಗೋವವನ್ನೂ ಒಳಗೊಂಡ ಪ್ರದೇಶವನ್ನು ಸ್ಥೂಲವಾಗಿ ಕೊಂಕಣ ಎಂದು ಕರೆಯುವುದಿದೆ. ಪಶ್ಚಿಮಘಟ್ಟಗಳ ಪಶ್ಚಿಮಕ್ಕಿರುವ ಈ ತಗ್ಗುನೆಲವೆಲ್ಲ ಮೈದಾನವಲ್ಲ. 30-50 ಮೈ. ಅಗಲ ಮತ್ತು 350 ಮೈ. ಉದ್ದ ಇರುವ ಈ ಪ್ರದೇಶದಲ್ಲಿ ನಡುನಡುವೆ ಬೆಟ್ಟಗಳು ಹಬ್ಬಿವೆ. ಉತ್ತರದಲ್ಲಿ ಕಡಲಕರೆಯ ಉದ್ದಕ್ಕೂ ಸಮತಲದ ಮೆಕ್ಕಲುಮಣ್ಣಿನ ಪಟ್ಟಿಯೊಂದುಂಟು. ಇದರ ಅಗಲ 4-8 ಮೈ. ಇದರ ಬದಿಯಲ್ಲಿ ಸಮಾಂತರವಾಗಿ ಹಬ್ಬಿರುವ ಅನೇಕ ಬೆಟ್ಟಗಳಿವೆ. ಇವುಗಳಲ್ಲಿ ಕೆಲವು ಶ್ರೇಣಿಗಳ ಎತ್ತರ 1500-2,000. ಮುಂಬಯಿಗೆ ಉತ್ತರದಲ್ಲಿರುವ ಪ್ರದೇಶದ ನದಿಗಳಲ್ಲಿ ವೈತರಣಾ, ಉಲ್ಹಾಸ್ ಮತ್ತು ಅಂಬಾ ಮುಖ್ಯವಾದವು. ಇವು ಬೆಟ್ಟದಿಂದ ಮೈದಾನಕ್ಕೆ ಇಳಿದ ಮೇಲೆ ಸ್ವಲ್ಪ ದೂರ ಕಡಲಕರೆಗೆ ಹೆಚ್ಚುಕಡಿಮೆ ಸಮಾಂತರವಾಗಿ ಸಾಗಿ ಕೊನೆಗೆ ಓರೆಯಾಗಿ ಸಮುದ್ರ ಸೇರುತ್ತದೆ. ಉಲ್ಹಾಸ್ ಮತ್ತು ಅದರ ಉಪನದಿಗಳು ಅರ್ಧವೃತ್ತಾಕಾರವಾದ ಒಂದು ವಿಶಾಲ ಜಲರೇಖೆಯನ್ನೇ ಸೃಷ್ಟಿಸಿವೆ. ಮುಂಬಯಿಗೆ ದಕ್ಷಿಣದಲ್ಲಿರುವ ನದಿಗಳು ಸಾಮಾನ್ಯವಾಗಿ ಉತ್ತರದ ನದಿಗಳಿಗಿಂತ ಉದ್ದದಲ್ಲಿ ಕಡಿಮೆ. ಸಾವಿತ್ರಿ ಮತ್ತು ವಾಶಿಷ್ಟಿ ನದಿಗಳೂ ಉಲ್ಹಾಸ್ ನದಿಯ ಹಾಗೆ ಅರ್ಧವೃತ್ತಗಳನ್ನು ರಚಿಸಿವೆ. ಇಲ್ಲಿಯ ನದಿಗಳ ತಲೆಗಳ ಭಾಗದ ಪ್ರದೇಶ ಕ್ರಮವಾಗಿ ನಗ್ನೀಕೃತವಾಗುತ್ತಿದೆಯೆಂಬುದು ಸ್ಪಷ್ಟ. ಕೊಯ್ನಾ ನದಿಯ ಮೇಲ್ದಂಡೆಯ ಪ್ರದೇಶ ಇದಕ್ಕೆ ಒಂದು ನಿದರ್ಶನ. ದಕ್ಷಿಣ ರತ್ನಾಗಿರಿ ಪ್ರದೇಶದಲ್ಲೂ ಮೇಲ್ಮಣ್ಣಿನ ಮುಸುಕು ಕಳೆದುಕೊಂಡ ಲ್ಯಾಟೆರೈಟ್ ಶಿಲಾಟೊಪ್ಪಿಗೆಯ ಪ್ರದೇಶಗಳನ್ನು ಕಾಣಬಹುದು. ಇಡೀ ಕೊಂಕಣದ ಬೆಂಗಡೆಗೆ ದೈತ್ಯಾಕಾರದಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ಒಂದೆರಡು ಮೈಲಿಗಳಲ್ಲೆ 3,000' ಎತ್ತರಕ್ಕೇರುವ ಈ ಘಟ್ಟಗಳ ನಡುನಡುವೆ ಇರುವ ಗಂಭೀರ ಕಂದರಗಳೂ ಕಣಿವೆಯ ಶಿರೋಪ್ರದೇಶಗಳೂ ಹಲವಾರು.	(ಎಂಎಚ್‍ಇ.) 

ಕೊಂಕಣವನ್ನು ಸ್ಥೂಲವಾಗಿ ಉತ್ತರ-ದಕ್ಷಿಣ ಭಾಗಗಳಾಗಿ ವಿಂಗಡಿಸಬಹುದು. ಉತ್ತರ ಕೊಂಕಣದಲ್ಲಿರುವ ಉಪವಿಭಾಗಗಳು ಎರಡು : ಮಾಹೀಂ ಪ್ರದೇಶ ಮತ್ತು ಮುಂಬಯಿ-ಕಲ್ಯಾಣ್ ಪ್ರದೇಶ. ದಕ್ಷಿಣ ಕೊಂಕಣವನ್ನು ಮಹಾದ್, ರತ್ನಾಗಿರಿ ಮತ್ತು ಗೋವ ಎಂದು ಮರುವಿಂಗಡಿಸಬಹುದು. ನೈಸರ್ಗಿಕ ಬಂದರನ್ನೊಳಗೊಂಡ ಮುಂಬಯಿ ನಗರ ಇರುವ ಉತ್ತರ ಕೊಂಕಣ ಪ್ರದೇಶ ದಕ್ಷಿಣಕ್ಕಿಂತ ಹೆಚ್ಚು ಮುಂದುವರಿದಿದೆ. ಮುಂಬಯಿಯ ಹತ್ತಿರದಲ್ಲಿ ಕರಾವಳಿ ಅತ್ಯಂತ ಅಗಲವಾಗಿದೆ. ಸಹ್ಯಾದ್ರಿಶ್ರೇಣಿಯಲ್ಲಿರುವ ಥಾಳ್‍ಘಾಟ್ ಮತ್ತು ಭೋರ್‍ಘಾಟ್‍ಗಳಿಂದಾಗಿ ಉತ್ತರ ಕೊಂಕಣದೊಂದಿಗೆ ಪೂರ್ವದ ವಿಶಾಲ ಹಿನ್ನಾಡಿನ ಸಂಪರ್ಕ ಏರ್ಪಟ್ಟಿದೆ. ಮುಂಬಯಿ ಭಾರತದ ಪಶ್ಚಿಮದ ಮಹಾದ್ವಾರವಾಗಿ ಪರಿಣಮಿಸಿರುವುದು ಈ ಘಾಟುಗಳಿಂದಾಗಿ.
ಕೊಂಕಣ ಪ್ರದೇಶದಲ್ಲಿ 75"-100" ಮಳೆಯಾಗುವುದರಿಂದ ಬತ್ತವೇ ಮುಖ್ಯ ಬೆಳೆ. ಉಳಿದ ಯಾವ ಬೆಳೆಯೂ ಪ್ರಾಮುಖ್ಯದಲ್ಲಿ ಇದರ ಹತ್ತಿರಕ್ಕೆ ಬರುವುದೇ ಇಲ್ಲ. ರಾಗಿ, ದ್ವಿದಳಧಾನ್ಯಗಳು ಇತರ ಬೆಳೆಗಳು. ಸೆಣಬು ಮತ್ತು ಮೆಸ್ತ 1947ರಿಂದೀಚೆಗೆ ಬೆಳೆಯುತ್ತಿವೆ. ದಕ್ಷಿಣದ ಕಡೆಗೆ ಸಾಗಿದಂತೆ ತೆಂಗು ವಿಶೇಷ. ನದಿಗಳ ಅಳಿವೆಗಳಲ್ಲಿ ಬೆಳೆಯುವ ಗುಲ್ಮ ವೃಕ್ಷಗಳು ಸೌದೆಯಾಗಿ ಉಪಯೋಗಕ್ಕೆ ಬರುತ್ತವೆ. ಲ್ಯಾಟೆರೈಟ್ ಆವೃತ ಪ್ರದೇಶಗಳಲ್ಲಿ ಹಿಂದೆ ದಟ್ಟವಾಗಿ ಕಾಡು ಬೆಳೆದಿತ್ತು. ಈಗ ಅವೆಲ್ಲ ನಗ್ನವಾಗಿವೆ. ನೆಲ ಅಷ್ಟೇನೂ ಫಲವತ್ತಲ್ಲ. ಜೋಳ ಮತ್ತು ಇತರ ಕೆಲವು ಧಾನ್ಯಗಳು ಬೆಳೆಯುತ್ತವೆ. ಘಟ್ಟಗಳೂ ಅವುಗಳ ಸನಿಹದ ಬೆಟ್ಟಗಳೂ ಸದಾ ಹಸಿರೆಲೆಯ ಕಾಡುಗಳಿಂದ ಕೂಡಿವೆ.

ಇಡೀ ಕೊಂಕಣ ಪ್ರದೇಶದ ಪ್ರಧಾನ ನಗರ ಮುಂಬಯಿ. ಠಾಣೆ ಮತ್ತು ಕಲ್ಯಾಣ್ ಇದಕ್ಕೆ ಕೂಡಿಕೊಂಡಿವೆ. ಕರಾವಳಿಯ ಉದ್ದಕ್ಕೂ ಹಲವಾರು ಸಣ್ಣಪುಟ್ಟ ಬಂದರುಗಳುಂಟು. ಅವು ಬಹುತೇಕ ಕ್ಷೀಣಸ್ಥಿತಿಯಲ್ಲಿವೆ. ಇವುಗಳಲ್ಲಿ ಕೆಲವು ಒಮ್ಮೆ ಪೋರ್ಚುಗೀಸರಿಗೆ ಸೇರಿದ್ದವು. ಚಾಲ್, ಬ್ಯಾಸೇನ್ ಉದಾಹರಣೆಗಳು. ಉಳಿದವು ಮೊಗಲರ ಮತ್ತು ಮರಾಠರ ವಶದಲ್ಲಿದ್ದುವು. ಅಂಥವುಗಳ ಪೈಕಿ ವಿಜಯದುರ್ಗ ಮುಖ್ಯವಾದ್ದು. ಇದು 150 ಮೈಲಿಗಳ ಉದ್ದದ ಕರಾವಳಿ ಪ್ರದೇಶದ ಮೇಲೆ ತನ್ನ ಪ್ರಭಾವ ಬೀರಿತ್ತು. 1757ರಲ್ಲಿ ನಡೆದ ಭಾರಿ ನೌಕಾ ದಾಳಿಯಿಂದ ಇದರ ಶಕ್ತಿ ಕುಗ್ಗಿತು. ಬ್ಯಾಸೇನ್ ಒಂದು ಆಯಕಟ್ಟಿನ ಸ್ಥಳವಾಗಿತ್ತು. ಈಗ ಇದೊಂದು ಸಣ್ಣ ಪಟ್ಟಣ. ಇಲ್ಲೊಂದು ಕೋಟೆಯಿದೆ. ದಕ್ಷಿಣದ ಬಂದರುಗಳೂ ಒಮ್ಮೆ ಪ್ರಮುಖ ಪಾತ್ರ ವಹಿಸಿದ್ದುವು. ಈಗ ರತ್ನಾಗಿರಿ ಒಂದೇ ಮುಖ್ಯ. ಈ ಸುತ್ತಿನ ಪ್ರದೇಶದಿಂದ ಮುಂಬಯಿಗೆ ಉದ್ಯೋಗಾರ್ಥಿಗಳ ನಿರಂತರ ಯಾತ್ರೆ ಸಾಗುತ್ತದೆ. ಇವರು ಬಹುತೇಕ ಯುವಕರು. ಮುಂಬಯಿಯಲ್ಲಿ ಉದ್ಯೋಗನಿರತರಾದವರು ಕಳಿಸುವ ಹಣ ಈ ಪ್ರದೇಶದ ಜನರ ಒಂದು ಮುಖ್ಯ ವರಮಾನ. ಕೊಯ್ನಾ ವಿದ್ಯುತ್ ಉತ್ಪಾದನೆಯಿಂದ ಈ ಸುತ್ತಿನ ಪ್ರದೇಶದ ಆರ್ಥಿಕ ಬೆಳೆವಣಿಗೆಗೆ ಹೆಚ್ಚಿನ ಅವಕಾಶವಿದೆ. ಇಲ್ಲಿ ಮಾವಿನಹಣ್ಣು ಮತ್ತು ಗೇರುಬೀಜಗಳ ಬೆಳೆಗಳನ್ನು ವೃದ್ಧಿಪಡಿಸಲು ಅವಕಾಶವುಂಟು.

ಗೋವಾ ಪ್ರದೇಶ ಬಹುಕಾಲದಿಂದ ಪೋರ್ಚುಗೀಸರ ಅಧೀನದಲ್ಲಿದ್ದುದರಿಂದ ವಿಶಿಷ್ಟವಾದ್ದಾಗಿದೆ. ಮಾರ್ಮಗೋವ ಒಂದು ಮುಖ್ಯ ಬಂದರು. ಮಾಂಡವಿ ಮತ್ತು ರಾಚೋಲ್ ಇಲ್ಲಿಯ ನದಿಗಳು.

ಮಹಾಭಾರತ, ಹರಿವಂಶ ಮತ್ತು ವಿಷ್ಣುಪುರಾಣದಲ್ಲಿ ಕೊಂಕಣದ ಜನರ ಬಗ್ಗೆ ಉಲ್ಲೇಖವಿದೆ. 6ನೆಯ ಶತಮಾನದಲ್ಲಿದ್ದ ವರಾಹಮಿಹಿರನ ಕೃತಿಯಲ್ಲೂ 7ನೆಯ ಶತಮಾನದ ಚಾಲುಕ್ಯ ಶಾಸನಗಳಲ್ಲೂ ಇವರ ಪ್ರಸ್ತಾಪ ಉಂಟು. ಕ್ರಿ.ಪೂ. 3ನೆಯ ಶತಮಾನ ಮತ್ತು ಕ್ರಿ.ಶ.2ನೆಯ ಶತಮಾನಗಳ ನಡುವೆ ಈ ಪ್ರದೇಶಕ್ಕೆ ಅಪರಾಂತ ಎಂಬ ಹೆಸರಿತ್ತು. ಅನಂತರದ ಸಂಸ್ಕøತ ಗಂಥಗಳಲ್ಲಿ ತ್ರಿಂಬಕದಿಂದ ಕನ್ಯಾಕುಮಾರಿಯವರೆಗಿನ ಇಡೀ ಕರಾವಳಿ ಪ್ರದೇಶವನ್ನು ಕೊಂಕಣವೆಂದು ಕರೆಯಲಾಗಿದೆಯಲ್ಲದೆ ಇದನ್ನು ಏಳು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳ ಹೆಸರುಗಳು ಒಂದೇ ರೀತಿಯಾಗಿಲ್ಲ. ಇವುಗಳಲ್ಲಿ ಮುಖ್ಯವಾಗಿ ಕೊಂಕಣವೆಂದು ಕರೆಯಬಹುದಾಗಿದ್ದ ಭಾಗ ಒಂದೇ. ಚಿಪ್ಲೂನ್ ಸುತ್ತಣ ಪ್ರದೇಶವೇ ಇದಾಗಿರಬಹುದು. ಇತಿಹಾಸದ ಯಾವುದೇ ಕಾಲದಲ್ಲೂ ಕೊಂಕಣ ಒಂದು ರಾಜಕೀಯ ಘಟಕವಾಗಿದ್ದಂತೆ ಕಾಣುವುದಿಲ್ಲ. 9ನೆಯ ಶತಮಾನದಿಂದ 14ನೆಯ ಶತಮಾನದ ವರೆಗಿನ ಅರಬ್ಬಿ ಭೂಗೋಳಶಾಸ್ತ್ರಜ್ಞರು ಈಗ ಕೊಂಕಣ ಎನಿಸಿಕೊಂಡಿರುವ ಪ್ರದೇಶದ ಪರಿಚಯ ಪಡೆದಿದ್ದರು. ಈ ಪ್ರದೇಶದಲ್ಲಿ ಹಲವಾರು ಸಣ್ಣಪುಟ್ಟ ಆಡಳಿತಗಳು ಇದ್ದದ್ದೂ ಉಂಟು. ಮರಾಠರ ಕಾಲದಲ್ಲಿ ಇಡೀ ಪ್ರದೇಶ ಅವರ ಅಧೀನದಲ್ಲಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ